Latest

ಕಾರ್ಕಳದಲ್ಲೂ ಬಂತು ಬಾಟಲಿ ಮಾದರಿ ಕಸದ ಬುಟ್ಟಿ

Share
Share

ಕಾರ್ಕಳ: ತಂಪು ಪಾನೀಯ, ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿದ ಬಳಿಕ ಸಾರ್ವಜನಿಕರು ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಯಲು ಕಾರ್ಕಳ ಪುರಸಭೆಯು ಪರಿಸರ ಸ್ನೇಹಿ ಹಾಗೂ ಆಕರ್ಷಕ ಹೆಜ್ಜೆ ಇಟ್ಟಿದೆ.
ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳ ವಿಲೇವಾರಿಗಾಗಿಯೇ ಪ್ರತ್ಯಕ್ಷವಾದ ‘ಬಾಟಲಿ ಮಾದರಿಯ ಕಸದ ಬುಟ್ಟಿ ಗಳನ್ನು ಅಳವಡಿಸಲಾಗುತ್ತಿದೆ.
ಮುಖ್ಯವಾಗಿ ಬೇರೆ ಬೇರೆ ಕಡೆಗಳಿಂದ ನಗರಕ್ಕೆ ಬರುವ ಸಾರ್ವಜನಿಕರು ಮತ್ತು ಪ್ರವಾಸಿಗರು  ನೀರಿನ ಬಾಟಲಿಗಳನ್ನು ಖರೀದಿಸಿ, ಬಳಕೆಯ ಅನಂತರ ರಸ್ತೆ ಹಾಗೂ ಬಸ್ ನಿಲ್ದಾಣಗಳ ಪಕ್ಕದಲ್ಲೇ ಬಿಸಾಡುತ್ತಿದ್ದರು.
ಮಳೆಗಾಲದಲ್ಲಿ ಇವು ನೇರವಾಗಿ ಚರಂಡಿಗಳನ್ನು ಸೇರಿ, ನೀರು ಸರಾಗವಾಗಿ ಹರಿಯದೆ ಕೃತಕ ನೆರೆಗೆ ಕಾರಣವಾಗುತ್ತಿತ್ತು. ಅಷ್ಟೇ ಅಲ್ಲದೆ, ನದಿ-ತೊರೆಗಳನ್ನು ಸೇರಿ ಜಲಚರಗಳ ಪ್ರಾಣಕ್ಕೂ ಕಂಟಕವಾಗುತ್ತಿತ್ತು. ಈ ಗಂಭೀರ ಸಮಸ್ಯೆಗೆ
ಮುಕ್ತಿ ಹಾಡಲು ಪುರಸಭೆ ವಿಶೇಷ ಯೋಜನೆಗೆ ಚಾಲನೆ ನೀಡಿದೆ.

ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಬೇಡಿ
ಸಾರ್ವಜನಿಕರು ಬಳಸಿದ ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯದೆ ಈ ಕಸದ ಬುಟ್ಟಿಗಳಲ್ಲಿಯೇ ಹಾಕಬೇಕು. ಇವು ಶೇ.80 ರಿಂದ 90ರಷ್ಟು ಭರ್ತಿಯಾದ ತತ್‌ಕ್ಷಣ ಪುರಸಭೇಯ ವಾಹನಗಳ ಮೂಲಕ ವಿಲೇವಾರಿ ಮಾಡಲಾಗುತ್ತದೆ. ಈ ಬುಟ್ಟಿಗಳಿಗೆ ಕೇವಲ ಪ್ಲಾಸ್ಟಿಕ್ ಬಾಟಲಿಗಳನ್ನು ಮಾತ್ರ ಹಾಕಿ ಸಾರ್ವಜನಿಕರು ಪುರಸಭೆಯೊಂದಿಗೆ ಸಹಕರಿಸಬೇಕು.-ಲೈಲಾ ಥಾಮಸ್, ಆರೋಗ್ಯ ನಿರೀಕ್ಷಕರು, ಕಾರ್ಕಳ ಪುರಸಭೆ

ಎಲ್ಲೆಲ್ಲಿ ಅಳವಡಿಕೆ?
ನಗರದ ಪ್ರಮುಖ ಆಯಕಟ್ಟಿನ ಸ್ಥಳಗಳಾದ ಮುಖ್ಯ ಬಸ್ ನಿಲ್ದಾಣದ ಬಳಿ ರೋಟರಿಸರ್ಕಲ್ ಹತ್ತಿರ ಹಾಗೂ ಪ್ರವಾಸಿಗರ ಪ್ರಮುಖ ಆಕರ್ಷಣೆಯಾದ ಗೊಮ್ಮಟಬೆಟ್ಟದ ಬಳಿ ಎರಡು ಕಡೆಗಳಲ್ಲಿ ಈ ಆಕರ್ಷಕ ಬಾಟಲಿ ಮಾದರಿಯ ಬುಟ್ಟಿಗಳನ್ನು ಈಗಾಗಲೇ ಇಡಲಾಗಿದೆ. ಪುರಸಭೆ ಆರೋಗ್ಯ ನಿರೀಕ್ಷಕಿ ಲೈಲಾ ಥಾಮಸ್ ಅವರ ನೇತೃತ್ವದಲ್ಲಿ ಪುರಸಭೆ ಸಿಬಂದಿ ವಿನಯ್, ಸುದೇಶ್ ಸಹಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಇತರೆ ಕಡೆಗಳಲ್ಲಿಯೂ ಅಳವಡಿಸುವ ಚಿಂತನೆ ಇದೆ ಎಂದು ಅಧಿಕಾರಿಗಳು ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *